ನಾವು ದೈವಜ್ಞರು - ಕಿರುಪರಿಚ
“ದೈವಂ ಜಾಗತಿ ಇತಿ ದೈವಜ್ಞ” ಅಂದರೆ ದೈವವನ್ನು ಅಥವಾ ದೇವರನ್ನು ಅರಿತವನು ದೈವಜ್ಞ ಇನ್ನೊಂದು ಮೂಲದ ಪ್ರಕಾರ ಭೂಗೋಳ ಶಾಸ್ತ್ರ, ಗಣಿತ ಸಿದ್ಧಾಂತ, ಹೋರಾಶಾಸ್ತ್ರ, ಶಕುನ, ಸಂಹಿತೆ, ಸ್ವರಶಾಸ್ತ್ರ, ಸಾಮುದ್ರಿಕ ಹಾಗೂ ಶಿಲ್ಪಶಾಸ್ತ್ರಗಳೆಂಬ ಎಂಟು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವನು ದೈವಜ್ಞ.
ವೈದಿಕ ಪರಂಪರೆಯ ನಿತ್ಯ ನೈಮಿತ್ತಿಕ ಕರ್ಮಗಳನ್ನು ಆಚರಿಸುತ್ತಾ ವಿಶೇಷವಾಗಿ ದೇವಯಜ್ಞ-ಯಾಗಾದಿಗಳನ್ನು ಮಾಡುತ್ತಾ ಬಂದಿರುವ ನಮ್ಮ ಸಮಾಜವು “ದೈವಜ್ಞ ಬ್ರಾಹ್ಮಣ” ಎಂದು ಪ್ರಸಿದ್ದಿಗೆ ಬಂತು.
ನಮ್ಮ ಮೂಲಸ್ಥಾನವನ್ನು ನಿಖರವಾಗಿ ಗುರುತಿಸಲು ಆಗದೇ ಇದ್ದರೂ ಮೂಲತಃ ಸಿಂಧೂ ಸಂಸ್ಕೃತಿಯ ಸರಸ್ವತಿ-ದೃಷ್ಟಿದ್ವತಿ-ಆಪಯೂ ನದಿಗಳ ತೀರದಲ್ಲಿ ನೆಲೆಸಿದ್ದರು ಎಂದು ನಂಬಲಾಗಿದೆ. ರಾಜಕೀಯ ಬದಲಾವಣೆಗಳಿಂದ ಸಾಮಾಜಿಕ ಶಾಂತಿಗೆ ಭಂಗವುಂಟಾಗಿ ಶಾಂತಿ ಪ್ರಿಯರಾದ ದೈವಜ್ಞರು ದಕ್ಷಿಣಾಭಿಮುಖವಾಗಿ ಹರಿಯುತ್ತಿರುವ ಸರಸ್ವತಿ ನದಿ ತೀರದಲ್ಲಿಯ ಸೌರಾಷ್ಟ್ರದ ಪ್ರಭಾಸ ಕ್ಷೇತ್ರದಲ್ಲಿ ನೆಲೆಸಿದ್ದರು. ಪ್ರಕೃತಿ ವಿಕೋಪ ಹಾಗೂ ವಿದೇಶಿಯರ ದಾಳಿಗಳಿಂದಾಗಿ ಕರಾವಳಿಗುಂಟ ಸಾಗಿ ಗೋವಾದ ಆಸು-ಪಾಸಿನಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡರು.
ಹಾಗಾಗಿಯೇ ನಮ್ಮ ಜನರ ಕುಲದೇವತೆಗಳು ಗೋವಾದಲ್ಲಿವೆ. ಪೋರ್ಚುಗೀಸರ ಮತಾಂತರದ ಉಪಟಳದಿಂದಾಗಿ ಹೆಚ್ಚಿನವರು ಕರ್ನಾಟಕ, ಮಹಾರಾಷ್ಟ್ರ ಕರಾವಳಿಯಲ್ಲಿ ಬೀಡು ಬಿಟ್ಟರು. ಮುಂದೆ ಹೊಟ್ಟೆಪಾಡಿಗಾಗಿ ಒಳನಾಡು ಪ್ರದೇಶಗಳಲ್ಲೂ ವಲಸೆ ಹೋಗಿರುತ್ತಾರೆ. ಇನ್ನು ಕೆಲವರ ಪ್ರಕಾರ ದೈವಜ್ಞ ಬ್ರಾಹ್ಮಣ ಗುಂಪುಗಳು ಪಶ್ಚಿಮ ಬಂಗಾಲ, ಆಸ್ಸಾಂ ಪ್ರದೇಶಗಳಿಂದ ವಲಸೆ ಬಂದವರೆಂದೂ ಅಭಿಪ್ರಾಯವಿದೆ.
ಸನಾತನ ವೈದಿಕ ಧರ್ಮದ ದೈವಜ್ಞ ಬ್ರಾಹ್ಮಣರು ಋಗ್ವದಿಗಳು ಸಪ್ತರ್ಷಿ ಗೋತ್ರದವರು ದೇವಭಾಷೆ ಸಂಸ್ಕೃತದಿಂದ ವಿಕಾಸಗೊಂಡ ಮಧುರಭಾಷೆ ಕೊಂಕಣಿಯು ದೈವಜ್ಞರ ಮಾತೃಭಾಷೆಯಾಗಿದೆ.
ಕೆಲ ಪೋರ್ಚುಗೀಸ ಮೂಲಗಳು ದೈವಜ್ಞರನ್ನು ಶ್ರೇಷ್ಠ (Superior) ಎಂದು ಕರೆದಿದ್ದಾರೆ. ಈ ಶ್ರೇಷ್ಠ ಪದವಿ ಶೇಟ್ ಎಂದು ರೂಪಾಂತರವಾಗಿದೆ. ಮುಂದೆ ಈ ಉಪನಾಮದ ಜೊತೆಗೆ ತಮ್ಮ ತಮ್ಮ ಕುಲದೇವತೆಗಳ ಸ್ಥಾನಗಳ ಜತೆ ಕರೆಯಲ್ಪಟ್ಟರು. (ಉದಾ: ರೇವಣಕರ, ರಾಯ್ಕರ, ವೆರ್ಣೇಕರ ಇತ್ಯಾದಿ)
ಅನ್ಯಮತೀಯರ ಅವೈದಿಕ ಸಿದ್ದಾಂತದಿಂದ ಸನಾತನ ವೈದಿಕ ಧರ್ಮವನ್ನು ಮುಕ್ತಗೊಳಿಸಿ ಹಿಂದೂ ಧರ್ಮವನ್ನು ಪುನರ್ ಪ್ರತಿಷ್ಠಾಪನೆಗೊಳಿಸಿದ ಅದೈತ ಸಿದ್ದಾಂತ ಪ್ರತಿಪಾದಕ ಶ್ರೀ ಶ್ರೀ ಆದಿಶಂಕರಾಚಾರ್ಯರ ಪರಮ ಗುರುಗಳಾದ ಶ್ರೀ ಶ್ರೀ ಗೋವಿಂದ ಭಗವತ್ಪಾದಾಚಾರ್ಯರ ಗುರುಗಳು ಶ್ರೀ ಗೌಡಪಾದಾಚಾರ್ಯರ ಕೈವಲ್ಯ (ಕವಳೆ) ಮಠದೊಂದಿಗೆ ದೈವಜ್ಞ ಬ್ರಾಹ್ಮಣರ ಪಾರಂಪರಿಕ ಆಚಾರ-ವಿಚಾರಗಳ ಧಾರ್ಮಿಕ ಸಂಬಂಧವು ಸೌಹಾರ್ದಯುತವಾಗಿತ್ತು ಎಂದು ಗೋವಾ – ಮಹಾರಾಷ್ಟ್ರ ಪ್ರಾಂತದ ದೈವಜ್ಞರು ಮತ್ತು ಸಾರಸ್ವತರು ಈಗಲೂ ಆ ಇತಿಹಾಸವನ್ನು ಜ್ಞಾಪಿಸಿಕೊಳ್ಳುತ್ತಾರೆ.
ಏಳನೇ ಶತಮಾನದಲ್ಲಿ ಕೈವಲ್ಯ (ಕವಳೆ) ಮಠವು ಕೊಂಕಣಿ ಮಾತನಾಡುವ ಎಲ್ಲ ಬ್ರಾಹ್ಮಣರಿಗೂ ಮೂಲಮಠವೇ ಆಗಿತ್ತು ಎಂದು ಅನೇಕ ಸಂಶೋಧನಾತ್ಮಕ ಗ್ರಂಥಗಳ ದಾಖಲೆಗಳಿಂದ ತಿಳಿದು ಬರುತ್ತದೆ.
ನಂತರ ಕೆಲವು ಸಾಮಾಜಿಕ/ಧಾರ್ಮಿಕ ನಡಾವಳಿಯ ಕಾರಣಗಳಿಂದಾಗಿ ಕೈವಲ್ಯ ಮಠದೊಂದಿಗಿನ ದೈವಜ್ಞ ಬ್ರಾಹ್ಮಣರ ಸಂಬಂಧ ಕಡಿದು ಹೋಯಿತು. ಕ್ರಿ. ಶ. 1980 ರವರೆಗೂ ದೈವಜ್ಞ ಸಮಾಜಕ್ಕೊಂದು ಶ್ರೀಮಠ ಸ್ವಜಾತಿಯ ಕುಲಗುರುಗಳು ಇರಲಿಲ್ಲ. ಕುಲದೇವರಾದ ಶಿವ-ಶಕ್ತಿ ಸ್ವರೂಪಿ ದೇವರುಗಳನ್ನೇ ಗುರುಭಾವನೆಯಿಂದ ಆರಾಧಿಸಿ ನಂಬಿ ಬಾಳಿಬಂದವರು ನಾವು.
ಮೂರುವರೆ ದಶಕಗಳ ಹಿಂದೆ ಸಮಸ್ತ ದೈವಜ್ಞ ಸಮಾಜ ಬಾಂಧವರಲ್ಲಿ ಸ್ವಧರ್ಮ ಪರಂಪರೆಯ ಬಗ್ಗೆ ಮತ್ತು ದೈವಜ್ಞಸಮಾಜಕ್ಕೊಂದು ಸ್ವತಂತ್ರ ಶ್ರೀಮಠ-ಶ್ರೀಗುರುಗಳನ್ನು ಹೊಂದಬೇಕೆಂಬ ಸ್ವಾಭಿಮಾನದ ಜಾಗೃತಿ ಉಂಟಾಗಿ ಸರ್ವ ಸ್ವತಂತ್ರ ಗುರುಪೀಠದ ಸ್ಥಾಪನೆಯ ಪರಿಕಲ್ಪದಂತೆ ದೈವಜ್ಞ ಪೂರ್ವಜರು ಪಾಲಿಸಿಕೊಂಡು ಬಂದಂತಹ ಚಂದ್ರಮಾನ ನಡುವಳಿಕೆಯ ಮೂಲ ಸ್ಮಾರ್ತ ಶಂಕರಾತ ಪರಂಪರೆಗೆ ಮರಳಿ ಶ್ರೀ ಜ್ಞಾನೇಶ್ವರೀ ಪೀಠ, ದೈವಜ್ಞ ಬ್ರಾಹ್ಮಣರ ಮಠವನ್ನು ಶ್ರೀ ಕ್ಷೇತ್ರ ಕರ್ಕಿಯಲ್ಲಿ ಸ್ಥಾಪಿಸಲಾಯಿತು.
ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿ ನಾಮಾಂಕಿತದಿಂದ ಪಟ್ಟಾಭಿಷಕ್ತರಾಗಿ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜಕ್ಕೆ ಪ್ರಪ್ರಥಮ ಕುಲಗುರುಗಳಾಗಿ ನಮಗೆ ದೊರೆತಿರುವುದು ಈಶ್ವರ ಸಂಕಲ್ಪ. ಶಿವಶಕ್ತಿ ಸ್ವರೂಪಿಣಿ ತಾಯಿ ಶ್ರೀ ಜ್ಞಾನೇಶ್ವರೀ ದೇವಿ ಶ್ರೀ ಗುರುಗಳ ಪಟ್ಟದೇವತೆಯಾಗಿ ಸಮಾಜವನ್ನು ಸಂರಕ್ಷಿಸುತ್ತಿರುವಳು.
ಪ್ರಮುಖವಾಗಿ ದೈವಜ್ಞರು ದೇವಿ ಉಪಾಸಕರು. ಕಾಸರಪಾಲ ಗೋವಾದ ಶ್ರೀ ಕಾಳಿಕಾದೇವಿ ಎಲ್ಲ ದೈವಜ್ಞ ಬ್ರಾಹ್ಮಣರ ಆರಾಧ್ಯ ದೇವತೆಯೆಂದು ಮಾನ್ಯತೆ ಪಡೆದಿರುವಳು. ಪ್ರತಿ ಮನೆತನದವರೂ ಪರಂಪರಾಗತವಾಗಿ ತಮ್ಮ ಕುಲದೇವರು ಪೂಜಿಸುವ ದೇವತೆಗಳನ್ನು ಆರಾಧಿಸುತ್ತಿದ್ದಾರೆ.
ಮಾತೃದೇವತೆಯ ರೂಪಗಳಾದ ಕಾಳಿಕಾ, ಶಾಂತದುರ್ಗಾ, ಮಹಾಮಾಯಾ, ಕಾಮಾಕ್ಷೀ, ಮಹಾಲಸಾ, ಭಗವತೀ ಹೀಗೆ ಶಕ್ತಿ ಸ್ವರೂಪಿಣಿಯನ್ನೂ ಶಿವನ ರೂಪಗಳಾಗಿ ನಾಗೇಶ, ಮಾಂಗೇಶ, ಶಿವನಾಥ, ರವಳನಾಥ, ಸೋಮೇಶ್ವರ, ವಿಮಲೇಶ್ವರ, ರಾಜೇಶ್ವರ, ರಾಮನಾಥ ಸ್ವರೂಪಗಳನ್ನು ತಮ್ಮ ಗೋತ್ರಗಳಿಗೆ ಅನುಸಾರವಾಗಿ ಆರಾಧಿಸುತ್ತಿದ್ದಾರೆ.
ನಮ್ಮ ಸಮಾಜ ಬಾಂಧವರಲ್ಲಿ ಕೆಲವರು 8 ಗೋತ್ರಗಳೆಂದೂ ಕೆಲವರು 7 1/2 ಗೋತ್ರಗಳೆಂದೂ ಹೇಳುವರು :
1) ವಶಿಷ್ಠ 2) ಅತ್ರಿ 3) ಕೌಶಿಕ 4) ವಿಶ್ವಾಮಿತ್ರ 5) ಕಶ್ಯಪ 6) ಭಾರದ್ವಾಜ 7) ಕೌಂಡಿಣ್ಯ ಮತ್ತು 8) ಶ್ರೀವತ್ಸ (ವಚ್ಛ) ಎಂದು ಪರಿಗಣನಿಸುವರು.
ವಶಿಷ್ಠ ಗೋತ್ರದವರು – ಶ್ರೀ ಕಾಮಾಕ್ಷಿ, ರಾಜೇಶ್ವರ
ಅತ್ರಿ – ಶ್ರೀ ಮಾಳಸಾ ನಾರಾಯಣೀ
ಕೌಶಿಕ – ಶ್ರೀ ವಿಮಲೇಶ್ವರ, ನಾಗೇಶ, ಶಾಂತದುರ್ಗಾ
ವಿಶ್ವಾಮಿತ್ರ – ಶ್ರೀ ನಾಗೇಶ, ಸೋಮೇಶ್ವರ
ಕಶ್ಯಪ – ಶ್ರೀ ರವಳನಾಥ, ಶಿವನಾಥ
ಭಾರದ್ವಾಜ – ಶ್ರೀ ಬೇತಾಳೇಶ್ವರ
ಕೌಂಡಿಣ್ಯ – ಶ್ರೀ ಸಾಂತೇರಿ ಕಾಮಾಕ್ಷಿ
ಶ್ರೀವತ್ಸ – ಶ್ರೀ ಶಾಂತದುರ್ಗಾ, ಕುತ್ತರಿ, ಮಹಾಮಾಯಾ
ಇನ್ನೂ ಕೆಲವು ಗೋತ್ರದವರು ಬೇರೆ ಕುಲದೇವತೆಗಳನ್ನು ಆರಾಧಿಸುವವರೂ ಇದ್ದಾರೆ.
– ವಸಂತ್ ದತ್ತರಾಮ ಅನ್ವೇಕರ್